ಕಾರವಾರ: ಕಾರವಾರದ ಬಾಲಮಂದಿರ ಪ್ರೌಢಶಾಲೆಯಲ್ಲಿ ನರ್ಸರಿಯಿಂದ 10ನೇ ತರಗತಿಯ ವಿದ್ಯಾರ್ಥಿಗಳ ಪಾಲಕರು ಮತ್ತು ಶಿಕ್ಷಕರ ಸಮಾವೇಶ ಏರ್ಪಡಿಸಲಾಯಿತು.
ಆರಂಭದಲ್ಲಿ ಕಾರವಾರ ಎಜ್ಯುಕೇಶನ್ ಸೊಸೈಟಿಯ ಆಡಳಿತಾಧಿಕಾರಿಗಳಾದ ಶ್ರೀ ಜಿ. ಪಿ. ಕಾಮತ್ ರವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, "ಮಕ್ಕಳಲ್ಲಿ ಪ್ರೀತಿ ವಿಶ್ವಾಸ ಸ್ವಾವಲಂಬನೆಯನ್ನು ಮೂಡಿಸುವುದೇ ನಿಜವಾದ ಶಿಕ್ಷಣ. ಮೊಬೈಲ್ ನಿಂದ ದೂರವಿದ್ದು, ಅಭ್ಯಾಸದಲ್ಲಿ ಶ್ರೇಯಸ್ಸನ್ನು ಹೊಂದುವಂತೆ ಪ್ರೇರೇಪಿಸುವುದೇ ಪಾಲಕರು ಮತ್ತು ಶಿಕ್ಷಕರ ಗುರಿಯಾಗಿರಬೇಕು" ಎಂದು ನುಡಿದರು.
ಇನ್ನೋರ್ವ ಅತಿಥಿಗಳಾದ ದಿವೇಕರ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ಶ್ರೀ ಆರ್. ಎಸ್. ಹಬ್ಬು ಮಾತನಾಡಿ, "ಮಕ್ಕಳ ಆಸೆ- ಆಕಾಂಕ್ಷೆಗಳಿಗೆ ತಕ್ಕಂತೆ ಪೂರಕವಾದ ಶಿಕ್ಷಣ ನೀಡಬೇಕಾದುದು ಪಾಲಕರ ಜವಾಬ್ಧಾರಿಯಾಗಿದೆ" ಎಂದು ನುಡಿದರು.
ಬಾಲಮಂದಿರ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಶ್ರೀಮತಿ ಅಂಜಲಿ ಮಾನೆ ವಿವರವಾದ “ಪವರ್ ಪಾಯಿಂಟ್ ಪ್ರಜೆಂಟೇಷನ್” ಮೂಲಕ ತರಬೇತಿ ನೀಡಿದರು.
ಒಟ್ಟು ಐದು ವಿಭಾಗಗಳಲ್ಲಿ ನಡೆಸಲಾದ ಈ ಕಾರ್ಯಕ್ರಮದಲ್ಲಿ ಸುಮಾರು ಒಂದುವರೆ ಸಾವಿರಕ್ಕೂ ಅಧಿಕ ಪಾಲಕರು ಪಾಲ್ಗೊಂಡು ಪ್ರಯೋಜನ ಪಡೆದರು. ತಮ್ಮ ಅಭಿಪ್ರಾಯಗಳನ್ನು ಚೀಟಿ ಮೂಲಕ ಬರೆದು ತಿಳಿಸಿದರು.
ಶಿಕ್ಷಕರಾದ ಶ್ರೀ ನಜೀರುದ್ದೀನ್ ಸೈಯದ್, ಶ್ರೀಮತಿ ಭಾರತಿ ಐಸಾಕ್ ಹಾಗೂ ಶ್ರೀಮತಿ ಗೀತಾ ಐಸಾಕ್ ಸೇರಿದಂತೆ ಶಾಲೆಯ ಎಲ್ಲಾ ಶಿಕ್ಷಕ- ಶಿಕ್ಷಕಿಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.